ಗ್ರೆನ್‍ವಿಲ್, ಜಾರ್ಜ್

	1712 ---- 1770. ಇಂಗ್ಲಿಷ್ ರಾಜಕಾರಣಿ. ರಿಚರ್ಡ್ ಗ್ರೆನ್‍ವಿಲನ ಎರಡನೆಯ ಮಗ. 1712ರ ಅಕ್ಟೋಬರ್ 14ರಂದು ಜನಿಸಿ, ಈಟನ್ ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿ ನ್ಯಾಯಾಶಾಸ್ತ್ರ ಶಿಕ್ಷಣ ಪಡೆದ. 1741ರಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ ಈತ ರಾಬರ್ಟ್ ವಾಲ್‍ಪೋಲನ ವಿರುದ್ಧವಾಗಿ ಟೆಂಪಲ್ ಮತ್ತು ಪಿಟ್‍ರೊಡನೆ ಸೇರಿಕೊಂಡ. ವೆಲ್‍ಹ್ಯಾಂ ಸರ್ಕಾರದಲ್ಲಿ 1744ರಲ್ಲಿ ಅಡ್ಮಿರಾಲ್ಟಿಯ ಲಾರ್ಡ್ ಆಗೂ 1747ರಲ್ಲಿ ಖಜಾನೆಯ ಲಾರ್ಡ್ ಆಗೂ ನೇಮಕಗೊಂಡ. 1745ರಲ್ಲಿ ನ್ಯೂಕ್ಯಾಸಲ್ ಡ್ಯೂಕನ ಅಡಿಯಲ್ಲಿ ನೌಕಾ ಕೋಶಾಧ್ಯಕ್ಷನಾದ. ಆದರೆ ನ್ಯೂಕ್ಯಾಸಲನ ವಿದೇಶಾಂಗ ನೀತಿಯನ್ನು ಟೀಕಿಸಿದ್ದಕ್ಕಾಗಿ ಈತನೂ ಪಿಟ್ಟನೂ ವಜಾ ಆದರು. 1756ರಲ್ಲಿ ಪಿಟ್ಟಿನ ಅಡಿಯಲ್ಲಿ ಮತ್ತೆ ಅದೇ ಹುದ್ದೆಗೆ ಈತನ ನೇಮಕವಾಯಿತು. 1757ರಲ್ಲಿ ಪಿಟ್ ಮತ್ತು ಲಾರ್ಡ್ ಟೆಂಪಲರನ್ನು ತೆಗೆದುಹಾಕಿದ್ದರಿಂದ ಈತನೂ ಅಧಿಕಾರಕ್ಕೆ ರಾಜೀನಾಮೆ ನೀಡಿದ. ಪಿಟ್ ಮತ್ತು ನ್ಯೂಕ್ಯಾಸಲರ ಯುದ್ಧ ಮಂತ್ರಿಮಂಡಲದಲ್ಲಿ ಗ್ರೆನ್‍ವಿಲ್ ಮತ್ತೆ ಅದೇ ಹುದ್ದೆಗೆ ನೇಮಿಸಲ್ಪಟ್ಟ. 1761ರಲ್ಲಿ ವಿಲಿಯಂ ಪಿಟ್ ಮತ್ತು ಟೆಂಪಲ್ ರಾಜೀನಾಮೆ ನೀಡಿದರೂ ಗ್ರೆನ್‍ವಿಲ್ ತನ್ನ ಹುದ್ದೆಯಲ್ಲಿ ಮುಂದುವರಿದ. 1762ರಲ್ಲಿ ಲಾರ್ಡ್ ಬ್ಯೂಟ್ ಗ್ರೆನ್ ವಿಲನನ್ನು ಮುಂದಕ್ಕೆ ತಂದ. ಅವನನ್ನು ಸದನದ ನಾಯಕನನ್ನಾಗಿಯೂ ಸ್ಟೇಟ್ ಸೆಕ್ರೆಟರಿಯಾಗಿಯೂ ನೇಮಿಸಿದ. ಆದರೆ ಬ್ಯೂಟನ ಸರ್ಕಾರ ಫ್ರಾನ್ಸ್ ಮತ್ತು ಸ್ಪೇನ್‍ಗಳೊಂದಿಗೆ ಮಾಡಿಕೊಂಡ ಶಾಂತಿ ಕೌಲಿನ ಷರತ್ತುಗಳನ್ನು ಈತ ಒಪ್ಪಲಿಲ್ಲ. ಅವನ್ನು ಪಾರ್ಲಿಮೆಂಟಿನಲ್ಲಿ ಸಮರ್ಥಿಸಲಿಲ್ಲ. ಆದ್ದರಿಂದ ಈತ ತನ್ನ ಹುದ್ದೆಯ ಬದಲು ಅಡ್ಮಿರಾಲ್ಟಿಯ ಪ್ರಥಮ ಲಾರ್ಡ್ ಹುದ್ದೆ ತಳೆದ. ತನ್ನ ಅನಂತರ ಈತ ಪ್ರಧಾನ ಮಂತ್ರಿಯಾಗಬೇಕೆಂದು ಬ್ಯೂಟ್ 1763ರಲ್ಲಿ ಜಾರ್ಜ್ ದೊರೆಗೆ ಸಲಹೆ ನೀಡಿದ.       

	ಗ್ರೆನ್‍ವಿಲ್ ಮಂತ್ರಿಮಂಡಲ (1763--65) ಜಯಪ್ರದವಾಗಲಿಲ್ಲ. ದೊರೆ ಪ್ರತಿಯೊಂದು ವಿಷಯವನ್ನೂ ಬ್ಯೂಟನೊಂದಿಗೆ ಚರ್ಚಿಸುತ್ತಿದ್ದ. ಗ್ರೆನ್‍ವಿಲನಿಗೂ ದೊರೆಗೂ ಸದಾ ಘರ್ಷಣೆಯಾಗುತ್ತಿತ್ತು. ಪಿಟ್ಟನ ನೇತೃತ್ವದಲ್ಲಿ ಸರ್ಕಾರ ರಚಿಸಲು ಬ್ಯೂಟ್ 1763ರಲ್ಲಿ ಯತ್ನ ನಡೆಸಿದ್ದರಿಂದ ಅಸಮಾಧಾನ ಬೆಳೆಯಿತು. ಅಮೆರಿಕನ್ ವಸಾಹತುಗಳ ಮೇಲೆ ತೆರಿಗೆ ವಿಧಿಸಬೇಕೆಂಬುದು ಗ್ರೆನ್‍ವಿಲನ ನೀತಿಯಾಗಿತ್ತು. 1764ರ ರೆವೆನ್ಯೂ ಕಾಯಿದೆ ಮತ್ತು 1765ರ ಸ್ಟಾಂಪ್ ಕಾಯದೆ ಈ ಉದ್ದೇಶದಿಂದ ತಂದಂಥವು. ಇವು ಅಮೆರಿಕನ್ ಕ್ರಾಂತಿ ಕಿಡಿ ಹಾರಲು ನಿಮಿತ್ತವಾದುವು. ಈತ ಇನ್ನೂ ಕೆಲವು ಅಪ್ರಿಯ ಕಾರ್ಯಗಳನ್ನು ಮಾಡಿದ್ದರಿಂದ ದೊರೆಯ ಅಸಮಾಧಾನ ಬೆಳೆಯಿತು. ಇವನ ಮಂತ್ರಿಮಂಡಲ ಉರುಳಿತು.    

	ಗ್ರೆನ್‍ವಿಲ್ ಸಮರ್ಥ ಸಂಸದೀಯನೂ ಹಣಕಾಸು ಆಡಳಿತಗಾರನೂ ಆಗಿದ್ದನಾದರೂ ರಾಜ್ಯನಿರ್ವಹಣೆಯ ಕೌಶಲ ಇವನಲ್ಲಿ ಅಷ್ಟಾಗಿ ಇರಲಿಲ್ಲ. ಇವನ ಬೇಜವಾಬ್ದಾರಿಯ ಭಾಷಣಗಳೂ ಅಮೆರಿಕನ್ ವಸಾಹತುಗಳ ತೆರಿಗೆಯ ನೀತಿಯೂ ವಸಾಹತುಗಳ ವಿರೋಧ ಬೆಳೆಯಲು ಕಾರಣವಾದುವು. ಗ್ರೆನ್‍ವಿಲ್ 1770ರ ನವೆಂಬರ್ 13ರಂದು ತೀರಿಕೊಂಡ.			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ